ಅಪರಿಚಿತರೊಡನೆ ಮಾತನಾಡದಿರು, ಯಾರೇನೇ ಕೊಟ್ಟರೂ ಸ್ವೀಕರಿಸದಿರು, ಗೊತ್ತಿರದವರ ಸ್ನೇಹ ಮಾಡದಿರು, ಎಂದೆಲ್ಲಾ ಜೋಪಾನ ಮಾಡಿದ ಹೆತ್ತವರು, ಮುಂದೊಂದು ದಿನ ಅವನು ಯಾರೆಂಬುದೇ ತಿಳಿಯದೆ, ಗುಣಾವಗುಣಗಳನ್ನು ಲೆಕ್ಕಿಸದೇ, ಜಾತಿ-ಕುಲ-ಬಣ್ಣ-ಆಸ್ತಿ ಅಂತಸ್ತುಗಳಿಗೆ ಮಗಳನ್ನೇ ಮಾರುವರು...
ಪ್ರೀತಿ-ಗೌರವ-ಅಭಿಮಾನಕ್ಕಾಗಿ ಒಪ್ಪಿದನೋ? ಅವಳ ಸೌಂದರ್ಯ, ಆಸ್ತಿಗಳಿಗಾಗಿ ಹಂಬಲಿಸಿದನೋ ಯಾರೂ ಅರಿಯಲೇ ಇಲ್ಲ !!
ಹೆತ್ತವರಿಗಾಗಿ ತನ್ನ ಆಸೆ-ಕನಸುಗಳನ್ನೆಲ್ಲಾ ತ್ಯಾಗ ಮಾಡಿ ಅಪರಿಚಿತರೊಂದಿಗೆ ಪರಿಚಿತಳಂತೆ ಬದುಕಲೆಂದು ಹೋದವಳು ಅಲ್ಲಿಯ ನೈಜತೆಯನ್ನರಿತು, ಕ್ರೌರತ್ವಕ್ಕೆ ಬಲಿಯಾಗಿ, ಸಹಿಸಿ, ಸತ್ತು-ಬದುಕಿ, ಬದುಕಿ-ಸತ್ತು, ಪ್ರೀತಿಯಿಂದ ಬದಲಾಯಿಸಲು ಪ್ರಯತ್ನಿಸಿ, ಅದಾಗದಿದ್ದಾಗ ಇನ್ನೇನು ದಾರಿಯೇ ಇಲ್ಲವೆನ್ನುವಾದಾಗ ಅನಿವಾರ್ಯವಾಗಿ ಸ್ವಾಭಿಮಾನದ ಬದುಕಿಗಾಗಿ ಸ್ವತಂತ್ರಳಾದರೆ ಈ ಸಮಾಜ ಹೇಳಿದ್ದು
ಅವಳು ಶೂರ್ಪನಖಿ, ಅವಳು ಅವಗುಣದವಳು, ಚಂಡಿ ಚಾಮುಂಡಿ !!!
ಹೌದು ಯಾರೆಷ್ಟೇ ಕಷ್ಟ ಕೊಟ್ಟರೂ ಸಹಿಸಿ ನಡೆವ ಉದಾರವಾಗಿ ಹೆಣ್ಣು ಇಂತಹ ನಿರ್ಧಾರಕ್ಕೆ ಬಂದಿರುವಳೆಂದರೆ ಅವಳು ಮನಸೆಲ್ಲ ಒಡೆದು ಹೋಗಿ ಇದ್ದೂ ಇರದಂತಾಗಿರುವ ಚಂಡಿ ಚಾಮುಂಡಿಯೇ ಸರಿ,
ಸಂಸಾರ-ಸಮಾಜಗಳನ್ನು ಧಿಕ್ಕರಿಸಿ ಹೋದ ಮಾಧವಿ ದೇವರಾದರೆ, ತನ್ನ ಸ್ವಾಭಿಮಾನಕ್ಕಾಗಿ ದೌರ್ಜನ್ಯವನ್ನು ಖಂಡಿಸಿ ಸ್ವತಂತ್ರಳಾದ ಇವಳಿಗೇಕೆ ವಿಚ್ಛೇದಿತೆ ಎಂಬ ಬಿರುದು? ಕಿಂಚಿತ್ತಾದರೂ ಪ್ರೀತಿ-ಗೌರವ-ಅನುಕಂಪ ತೋರಿ ಅವಳನ್ನು ಹತ್ತಿರ ಕರೆದು,
ತುಂಬಿಕೊಂಡುಬಿಡುವಳು ಕಣ್ಣ ತುಂಬಾ ನೆತ್ತರು,
ಈ ಸಮಾಜದಿ ಬಿಗಿ ಹಿಡಿದು ಬದುಕುತ್ತಿರುವಳು ಅವಳ ಉಸಿರು...
- ರಾಘವೇಂದ್ರ ಡಿ. ತಳವಾರ 😊