ಹಿಡಿ ಮುಂಡಿಗೆ ರೋಗಕ್ಕೆ ತುತ್ತಾದ ಅಡಕೆ ಮರಗಳ ತುದಿಭಾಗ ಬೆಂಡಾಗಿ ಎಲೆಗಳು ಉದುರಿ ಹಿಂಗಾರ ಬರದೇ ಮರವೇ ನಾಶವಾಗುತ್ತೆ. ಹಿಡಿ ಮುಂಡಿಗೆ ರೋಗ ಒಂದು ತೋಟದಿಂದ ಇನ್ನೊಂದು ತೋಟಕ್ಕೆ ಹರಡುವ ರೋಗವಾಗಿರುವುದರಿಂದ ಮುನ್ನೆಚ್ಚರಿಕೆ ಕೈಗೊಳ್ಳದಿದ್ದರೆ, ಈ ರೋಗವು ಪೂರ್ತಿ ತೋಟವನ್ನೇ ವ್ಯಾಪಿಸುವ ಆತಂಕ ಎದುರಾಗಬಹುದು.
ತಜ್ಞರ ಪ್ರಕಾರ, ಕೃಷಿ ಭೂಮಿಯಲ್ಲಿ ಟ್ರ್ಯಾಕ್ಟರ್ ಹೊಡೆಸುವುದರಿಂದ ಬೇರಿಗೆ ಉಂಟಾಗುವ ಪೆಟ್ಟು ಮತ್ತು ಕೆರೆ ಮಣ್ಣು ಬಳಕೆ ಹಿಡಿ ಮುಂಡಿಗೆ ರೋಗಕ್ಕೆ ಕಾರಣಗಳಾಗಿವೆ.
ಈ ರೋಗಕ್ಕೆ ಪರಿಹಾರವೇನು ಎಂದು ನೋಡುವುದಾದರೆ, ಸಾಮಾನ್ಯವಾಗಿ ಗದ್ದೆ ಜಾಗದಲ್ಲಿ ಆರು ಅಡಿಗಿಂತ ಹೆಚ್ಚು ಆಳದಲ್ಲಿ ಗಟ್ಟಿ ಪದರ ಸಿಗುತ್ತದೆ. ಇದರಿಂದ ಅಡಿಕೆ ಮರದ ಬೇರುಗಳು ಆಳಕ್ಕೆ ಇಳಿಯಲು ಸಾಧ್ಯವಾಗದೇ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ, ಸತ್ತ ಮರದ ಪಕ್ಕ ಹೊಸದಾಗಿ ಗಿಡ ನೆಟ್ಟು ಬೆಳೆಸಿದರೆ ತೋಟವನ್ನು ಉಳಿಸಿಕೊಳ್ಳಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.
ಅದೇ ರೀತಿ, ಅಡಿಕೆ ಮರಗಳ ಬೇರುಗಳ ಪೋಷಕಾಂಶ ನಿರ್ವಹಣೆ ಹಾಗೂ ಉಸಿರಾಟಕ್ಕೆ ಅನುಕೂಲವಿದ್ದರೆ ಮರಗಳು ಉತ್ತಮ ಬೆಳವಣಿಗೆ ಕಾಣುತ್ತವೆ. ಇದಕ್ಕಾಗಿ ಅಂತರ್ಗತ ಕಾಲುವೆ ಎಂದರೆ ಬಸಿಗಾಲುವೆ ನಿರ್ಮಿಸುವುದು ಸೂಕ್ತ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಅಧಿಕಾರಿಗಳು.